ಕಸಾಯಿ ಖಾನೆ

 ಮನುಷ್ಯರಿಗೆ ಮಾಂಸಾಹಾರ ಒದಗಿಸಲು ಪ್ರಾಣಿಗಳನ್ನು ವಧೆ ಮಾಡುವ ಮನೆ (ಸ್ಲಾಟರ್ ಹೌಸ್). ಇದು ಸಾಮಾನ್ಯವಾಗಿ ಊರ ಹೊರಗೆ ಇರುತ್ತದೆ. ಇಂಥ ಮನೆಗೆ ಆಬಾಟ್ರಿ ಅಥವಾ ಹೊಡೆದು ಹಾಕು ಎಂಬ ಪದದಿಂದ ಅಸ್ತಿತ್ವಕ್ಕೆ ಬಂದ ಅಬಾಟ್ವಾರ್ ಎಂಬ ಹೆಸರು ರೂಢಿಯಲ್ಲಿದೆ. ಇಂದಿನ ಕಸಾಯಿ ಖಾನೆಯಲ್ಲಿ ಪ್ರಾಣಿಗಳ ವಧೆಗೆ ಬೇಕಾದ ಆಧುನಿಕ ಉಪಕರಣಗಳನ್ನು ಜೋಡಿಸಿರುತ್ತಾರೆ. ಮಧ್ಯದ ಹಜಾರಿನಲ್ಲಿ ಪ್ರಾಣಿಗಳ ಮುಂಡವನ್ನು ತೂಗುಹಾಕಿ ಅದರಿಂದ ಮಾಂಸವನ್ನು ಬೇರ್ಪಡಿಸುವ ಉಪಕರಣಗಳನ್ನು ಸಜ್ಜು ಮಾಡಿರುತ್ತಾರೆ. ಅದರ ಎದುರು ಭಾಗದಲ್ಲಿ ಶೀತಳ ಗೂಡುಗಳಿರುತ್ತವೆ. ಇವುಗಳಲ್ಲಿ ಮಾಂಸವನ್ನು ದಾಸ್ತಾನು ಮಾಡಿ ಹದ ಮಾಡುತ್ತಾರೆ. ಈ ಹಜಾರದಲ್ಲಿ ಒಂದು ಬಾಗಿಲು ಮಾರುಕಟ್ಟೆಯಿಂದ ತಂದ ದನಗಳ ದೊಡ್ಡಿಗೆ ಹೋಗುತ್ತದೆ. ಕಸಾಯಿ ಖಾನೆಯ ನೆಲ ಎಲ್ಲೆಡೆಯಲ್ಲೂ ನೀರು ಇಂಗದಂತೆ ಹಸನಾಗಿರಬೇಕು. ಅಚ್ಚು ಕಟ್ಟಾದ ಚರಂಡಿಗಳಿದ್ದಲ್ಲಿ ನೀರು ನಿಲ್ಲದೆ ಹರಿದು ಒಟ್ಟು ವಾತಾವರಣದ ನೈರ್ಮಲ್ಯಕ್ಕೆ ಸಹಾಯಕವಾಗಿರುತ್ತದೆ. ಎಲ್ಲ ಆಧುನಿಕ ಕಸಾಯಿ ಖಾನೆಗಳಲ್ಲೂ ಒಂದು ಸಣ್ಣ ಪ್ರಯೋಗ ಶಾಲೆ ಇರುತ್ತದೆ. ಇಲ್ಲಿ ಮಾಂಸವನ್ನು ರೋಗೋತ್ಪತ್ತಿ ಜೀವಾಣುಗಳ, ಮತ್ತಿತರ ಗುಣಗಳ ಪರೀಕ್ಷೆ ಮಾಡುವುದು ಸಾಧ್ಯ. ತಿನ್ನುವುದಕ್ಕೆ ಯೋಗ್ಯವಲ್ಲದ ಮಾಂಸವನ್ನು ಉತ್ತಮವಾದ ಮಾಂಸದಾಸ್ತಾನು ಮಾಡಿರುವ ಹಜಾರದಿಂದ ದೂರವಾಗಿ ಬೇರೆ ಸ್ಥಳದಲ್ಲಿ ಶೇಖರಿಸಿರುತ್ತಾರೆ. ಸಾಮಾನ್ಯವಾಗಿ ಕಸಾಯಿ ಖಾನೆಗಳು ಊರಿನ ಹೊರಗೆ ಸಾಗಾಣಿಕೆಗೆ ಅನುಕೂಲವಾಗಿ ರೈಲ್ವೆ ನಿಲ್ದಾಣ ಮತ್ತು ಮಾಂಸದ ಮಾರುಕಟ್ಟೆಗಳಿಗೆ ಹಾಗೂ ಅಂಗಡಿಗಳಿಗೆ ಸಮೀಪವಾಗಿರುತ್ತವೆ.  ಇದಲ್ಲದೆ ಪ್ರಾಣಿಗಳನ್ನು ವಧೆ ಮಾಡುವ ಮೊದಲು ಅವುಗಳಲ್ಲಿ ಮನುಷ್ಯನಿಗೆ ಹಾನಿಕರವಾದ ರೋಗಗಳಿವೆಯೇ ಎಂಬುದನ್ನು ಪರೀಕ್ಷಿಸಲು ಬೇಕಾದ ಸಲಕರಣೆಗಳು ಮತ್ತು ಸಿಬ್ಬಂದಿ, ಆಧುನಿಕ ಕಸಾಯಿ ಖಾನೆಗಳಲ್ಲಿ ಅನಿವಾರ್ಯ. ನೈರ್ಮಲ್ಯದ ದೃಷ್ಟಿಯಿಂದ ಕೊಂದ ಪ್ರಾಣಿಗಳಿಂದ ಒದಗುವ ಮಾಂಸ, ಹಾಗೂ ಉಪ ಉತ್ಪನ್ನಗಳಾದ ಚರ್ಮ, ಕೊಂಬು, ಗೊರಸು, ರಕ್ತ, ಗೊಬ್ಬರವಾಗಬಲ್ಲ ಮಾಂಸದ ಕಸ ಇವುಗಳ ವ್ಯವಸ್ಥೆಯ ಕಾರ್ಯ ಶೀಘ್ರವಾಗಿ ಮಾಡುವ ಅನುಕೂಲ ಕಸಾಯಿ ಖಾನೆಗಳಲ್ಲಿ ಅಗತ್ಯ. ಕಸಾಯಿ ಖಾನೆಯ ಕೇಂದ್ರ ಕಟ್ಟಡದ ಮಾದರಿ ಎರಡು ತೆರನಾದ್ದು: 1 ಯಾವುದೇ ಅಡ್ಡ ಗೋಡೆಗಳಿಲ್ಲದ ಒಂದು ದೊಡ್ಡ ಹಜಾರ; ಇದರಲ್ಲಿ ಪ್ರಾಣಿಗಳನ್ನು ವಧೆ ಮಾಡುವ ಹಾಗೂ ಮುಂಡದಿಂದ ಮಾಂಸ ಬೇರ್ಪಡಿಸುವ ಉಪಕರಣಗಳನ್ನು ಜೋಡಿಸಿರುತ್ತಾರೆ. 2 ದೊಡ್ಡ ಹಜಾರವನ್ನು ಅರ್ಧ ಎತ್ತರದ ಅಡ್ಡ ಗೋಡೆಗಳಿಂದ ವಿಂಗಡಿಸಿದ 5 ಮಳಿಗೆಯಂಥ ವಿಭಾಗಗಳು. ಪ್ರತಿಯೊಂದರಲ್ಲೂ 4-5 ಕುರಿ ಅಥವಾ ಇತರ ಪ್ರಾಣಿಗಳನ್ನು ಕೊಂದ ಮಾಂಸವನ್ನು ಬೇರ್ಪಡಿಸುವ ಏರ್ಪಾಡಿರುತ್ತದೆ. ಇಂಗ್ಲೆಂಡ್ ದೇಶದಲ್ಲಿ ಇಂಥ ಕಸಾಯಿ ಮಳಿಗೆಗಳು ಸಾಮಾನ್ಯ. ಈ ರೀತಿಯ ವ್ಯವಸ್ಥೆಯಿಂದ  ಒಂದು ಪ್ರಾಣಿಯ ವಧೆಯನ್ನು ಇನ್ನೊಂದು ಪ್ರಾಣಿ ನೋಡುವುದು ತಪ್ಪುತ್ತದೆ. ಖಾಸಗೀ ಕಟುಕರು ಒಂದೆರೆಡು ಮಳಿಗೆಗಳನ್ನು ಬಾಡಿಗೆಗೆ ತೆಗೆದುಕೊಂಡು ಅವರು ತಂದ ಪ್ರಾಣಿಗಳನ್ನು ಇತರರಿಂದ ಅಡಚಣೆಗಳಿಲ್ಲದೆ ಕೊಂದು ಮಾಂಸವನ್ನು ಒಪ್ಪ ಮಾಡಿ ತೆಗೆದುಕೊಂಡು ಹೋಗಬಹುದು. ಒಂದೇ ರೀತಿಯ ಕಸಾಯಿಖಾನೆ ಇರುವ ಸಂದರ್ಭದಲ್ಲಿ ಕೇಂದ್ರ ಕಟ್ಟಡದಲ್ಲಿ, ದನ, ಕರು, ಕುರಿಗಳ ವಧೆಗೆ ಕೇಂದ್ರ ಕಟ್ಟಡವನ್ನು ಬಳಸುತ್ತಾರೆ. ಹಂದಿ ಮಾಂಸ ಬೇರ್ಪಡೆಗೆ ಕೊರೆ ಮುಳ್ಳುಗಳನ್ನು ತೆಗೆಯಬೇಕಾಗಿರುವುದರಿಂದ ಅದಕ್ಕೋಸ್ಕರ ಬೇರೆ ಕಟ್ಟಡದ ಏರ್ಪಾಡಿರುತ್ತದೆ.

 ಭಾರತದಲ್ಲಿ ಕುರಿ, ಆಡು, ಜಾನುವಾರು, ಹಂದಿ ಮುಂತಾದ ಬೇರೆ ಬೇರೆ ಜಾತಿಯ ಪ್ರಾಣಿಗಳಿಗೆ ಪ್ರತ್ಯೇಕ ಕಸಾಯಿ ಖಾನೆಗಳಿರುತ್ತವೆ. ಗೋಮಾಂಸ ತಿನ್ನದ ಜನಕ್ಕೋಸ್ಕರ ಕೇವಲ ಆಡು ಕುರಿಗಳನ್ನು ಕೊಂದು ಅವುಗಳ ಮಾಂಸವನ್ನೊದಗಿಸಲು ಕಸಾಯಿ ಖಾನೆಗಳಿವೆ. ಹಾಗೆಯೇ ಹಂದಿ ಮಾಂಸವನ್ನು ತಿನ್ನದ ಜನಗಳ ಅನುಕೂಲಕ್ಕೋಸ್ಕರ ಪ್ರತ್ಯೇಕವಾದ ಹಂದಿಗಳ ಕಸಾಯಿ ಖಾನೆಗಳ ವ್ಯವಸ್ಥೆ ಇದೆ.

 ಆಧುನಿಕ ಕಸಾಯಿ ಖಾನೆಗಳಲ್ಲಿ ಪ್ರಾಣಿಗಳ ಮುಂಡವನ್ನು ನೆತ್ತಿಯ ಮೇಲ್ಗಡೆ ಹಾಕಿದ ಕಂಬಿಗಳ ಸಹಾಯದಿಂದ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವ ಏರ್ಪಾಟಿರುತ್ತದೆ.  ಹಾಗೆಯೇ ಉಪ ಉತ್ಪನ್ನಗಳನ್ನು ತಂತಿ ಬುಟ್ಟಿಗಳು ಇಲ್ಲವೆ ಕಡಾಯಿಗಳ ಮೂಲಕ ಸಾಗಿಸುತ್ತಾರೆ.  ಇವುಗಳಲ್ಲದೆ ಬೇಸಗೆಯಲ್ಲಿ ಉಪಯೋಗಕ್ಕೋಸ್ಕರ ಶೀತಾಗಾರದ ವ್ಯವಸ್ಥೆ ಇರುತ್ತದೆ. ಚರ್ಮ ಸುಲಿದ ಮುಂಡಗಳನ್ನು ಒಂದು ಸ್ಥಳದಿಂದ ಇನ್ನೊಂದು ಊರಿಗೆ ಸಾಗಿಸುವುದಕ್ಕೂ ಶೀತಳ ವ್ಯವಸ್ಥೆ ಅಗತ್ಯ.

 ಉಪೋತ್ಪನ್ನಗಳು: ಆಹಾರಯೋಗ್ಯ ಮಾಂಸ ಕಸಾಯಿ ಖಾನೆಯ ಪ್ರಧಾನ ಉತ್ಪನ್ನ, ಉಪೋತ್ಪನ್ನಗಳಲ್ಲಿ ಮುಖ್ಯವಾದವು ತೊಗಲು ಮತ್ತು ಕೊಬ್ಬು, ಪ್ರಾಣಿ ರಕ್ತ, ಗ್ರಂಥಿಗಳು, ಕರುಳು, ಮೂಳೆ ಇವೆಲ್ಲವುಗಳಿಗೆ ವಿಶಿಷ್ಟವಾದ ಉಪಯೋಗಗಳಿವೆ.             

(ಎಸ್.ಎಂ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ